Thursday, February 9, 2012

ಸ್ವಪ್ನ ಸಾರಸ್ವತ - ಅದ್ಭುತ ಕಥನ


ಸ್ವಪ್ನ ಸಾರಸ್ವತ (ಕಾದಂಬರಿ): ಕೇಂದ್ರ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಗಳಿಂದ ಪುರಸ್ಕೃತ ಕೃತಿ

ಲೇಖಕರು: ಶ್ರೀ ಗೋಪಾಲಕೃಷ್ಣ ಪೈ
ಪ್ರಕಾಶಕರು: ಭಾಗ್ಯಲಕ್ಷ್ಮೀ ಪ್ರಕಾಶನ, ಬೆಂಗಳೂರು
ಬೆಲೆ: ರೂ; ೩೨೫

"ಸ್ವಪ್ನ ಸಾರಸ್ವತ’’ವನ್ನು ಓದಿ ಇದನ್ನು ಬರೆಯುತ್ತಿದ್ದೇನೆ. ಮೊದಲನೆಯದಾಗಿ ಈ ಅದ್ಭುತ ಸಾಧನೆಗಾಗಿ ಲೇಖಕ ಶ್ರೀ ಗೋಪಾಲಕೃಷ್ಣ ಪೈಯವರಿಗೆ ಅಭಿನಂದನೆಗಳು! ೪೭೦ ಪುಟಗಳಷ್ಟು ದೀರ್ಘವಾದ ಕಾದಂಬರಿಯನ್ನು ನಿಧಾನವಾಗಿ ಆಸ್ವಾದಿಸುತ್ತಾ ಓದಲು ಮೂರು ವಾರ ತೆಗೆದುಕೊಂಡೆ.
ಈ ಕಾದಂಬರಿಗಾಗಿ ಪೈ ಅವರು ಹಲವಾರು ವರ್ಷಗಳ ಕಾಲ ಸಂಶೋಧನಾ ಕಾರ್ಯ ಮಾಡಿದ್ದು ಅಚ್ಚರಿಯಲ್ಲ! ಅದಿಲ್ಲದೆ ಇಂತಹ ಇತಿಹಾಸವನ್ನು ಆಧಾರವಾಗಿಟ್ಟುಕೊಂಡು ಸೃಜನಾತ್ಮಕ ಕಾದಂಬರಿಯನ್ನು ಸೃಷ್ಟಿಸಲು ಅಸಾಧ್ಯ. ಕಥನ ತಂತ್ರ (ಅಜ್ಜ ಮೊಮ್ಮಗನಿಗೆ ವಂಶದ ಕತೆ ಹೇಳುವುದು) ಉತ್ತಮವಾಗಿದೆ. ಈ ಕಾದಂಬರಿಯನ್ನು ಓದುವಾಗ ಓದುಗರಿಗೆ ಭೈರಪ್ಪನವರ ನೆನಪಾಗಿಯೇ ಆಗುತ್ತದೆ. ಆವರಣದಲ್ಲಿ ಇಂತಹದೇ ಇನ್ನೊಂದು ತಂತ್ರವನ್ನು ಬಳಸಿದ್ದಾರೆ. ಬೈರಪ್ಪನವರು ಆಧಾರ ಗ್ರಂಥಗಳನ್ನೂ ಹೆಸರಿಸಿದ್ದಾರೆ. ಇಲ್ಲಿ ಅದರ ಅಗತ್ಯವಿಲ್ಲ. ಪ್ರಥಮ ಕಾದಂಬರಿಗೇ ಬುಕರ್ ಪ್ರಶಸ್ತಿ ಗಳಿಸಿದ ಅರವಿಂದ ಅಡಿಗರ White Tigerನಲ್ಲಿ ಭಾರತಕ್ಕೆ ಭೇಟಿ ಕೊಡಲಿರುವ ಚೀನಾದ ಪ್ರಧಾನಿಗೆ ಭಾರತದ ಸ್ಥಿತಿಗತಿಗಳ ಬಗ್ಗೆ ಪತ್ರ ಬರೆಯುವ ಮೂಲಕ ಕತೆ ಹೇಳಿಸುವುದೇ ತಂತ್ರ. (ಈ ಕಾದಂಬರಿಗೆ ಹೇಗೆ ಮತ್ತು ಏಕೆ ಪ್ರಶಸ್ತಿ ಬಂತೆಂದು ಗೊತ್ತಿಲ್ಲ.)
ಐತಿಹಾಸಿಕ ವಿಷಯವನ್ನು ಎತ್ತಿಕ್ಕೊಂಡು ಆ ಕಾಲಕ್ಕೊಪ್ಪುವ ಅಥವಾ ಆ ಕಾಲದ ಸಾಮಾಜಿಕ ಘಟನೆಗಳಿಗೆ ಅಥವಾ ಪರಿಸ್ಥಿಗೆ ಹೊಂದುವಂತೆ ಒಂದು ಸೃಜನಾತ್ಮಕ ಕಾದಂಬರಿ ರಚಿಸುವುದು ಸುಲಭದ ಮಾತಲ್ಲ! ಇದು ಹಿಂದಿನ ಐತಿಹಾಸಿಕ ಕಾದಂಬರಿಗಳ (ಉದಾ: ಗಳಗನಾಥರ ಕಾದಂಬರಿಗಳು) ಸಾಲಿಗೆ ಸೇರುವಂತದ್ದಲ್ಲ. ಪಿ.ವಿ.ನರಸಿಂಹ ರಾಯರ ಆತ್ಮಕತೆಯೆಂದೇ ಬಿಂಬಿಸಲ್ಪಟ್ಟ Insider ಕೂಡಾ ಈ ರೀತಿಯ ಪ್ರಯತ್ನ. ಅದು ಕಾಂಗ್ರೆಸ್ ಪಕ್ಷದ ರಾಜಕೀಯ ಇತಿಹಾಸದ ಕಾದಂಬರಿಯೆಂದೇ ಹೇಳಬಹುದು. ಅದರ ಕಥಾನಾಯಕನನ್ನು ನರಸಿಂಹ ರಾಯರೆಂದೇ ಗುರುತಿಸುತ್ತಾರೆ.
ಪೈ ಅವರ ಕಥನ ರೀತಿ ಮತ್ತು ಶೈಲಿ ಆಸಕ್ತಿ ಹುಟ್ಟಿಸುವಂತದ್ದು; ವ್ಯಕ್ತಿ ಚಿತ್ರಣ ವ್ಯಕ್ತಿಗಳನ್ನು ನಮ್ಮೆದುರೇ ತಂದು ನಿಲ್ಲಿಸುತ್ತದೆ. ಕಥಾ ವಸ್ತು (ಒಂದು ಸಮಾಜ - ಸಾರಸ್ವತ - ದ ವಲಸೆ) ವಿನೂತನ ಮತ್ತು ಕುತೂಹಲದಾಯಕ. ಉತ್ತರದಿಂದ ದಕ್ಷಿಣಕ್ಕೆ ನದಿಯ ಪ್ರವಾಹದಂತೆ ಸಾಗುವ ಕತೆಯಲ್ಲಿ ಬರುವ ವ್ಯಕ್ತಿಗಳ ಸಂಖ್ಯೆ ಬಹು ದೊಡ್ಡದು. ಮೂರ್ನಾಲ್ಕು ತಲೆಮಾರುಗಳ ವ್ಯಕ್ತಿಗಳನ್ನೂ, ಅವರೊಳಗಿನ ಸಂಬಂಧಗಳನ್ನೂ ನೆನಪಿಟ್ಟುಕೊಂಡು ಮುಂದುವರಿಯುವುದು ಓದುಗನಿಗೆ ಸುಲಭವಲ್ಲ! ಕತೆಗಾರನಿಗೆಂತೋ!! ಈ ಪ್ರವಾಹದ ಕವಲುಗಳು ಅನೇಕ ಇರಬಹುದು. ಒಂದು ಕವಲು ಬಳ್ಳಂಬೆಟ್ಟಿಗೆ ಸಾಗುತ್ತದೆ.
ಬಳ್ಳಂಬೆಟ್ಟು ಕುಟುಂಬದವರೇ ಆದ ಗೋಪಾಲಕೃಷ್ಣ ಪೈ ಆ ಕವಲನ್ನೇ ಆಯ್ದುಕೊಂಡುದು ಸಹಜವೆ. (ನಿಜವಾದ ಬಳ್ಳಂಬೆಟ್ಟು ಜೀವನದ ವಾಸ್ತವ ಚಿತ್ರಣ ಮಂಗಳೂರು ಆಕಾಶವಾಣಿಯಲ್ಲಿರುವ ಶಶಿಕಲಾ ಅವರು ಧಾರಾವಾಹಿಯಾಗಿ ಅಂತರ್ಜಾಲ ಪತ್ರಿಕೆ ಕೆಂಡಸಂಪಿಗೆಯಲ್ಲಿ ಪ್ರಕಟಿಸುತ್ತಿರುವ "ಬಳ್ಳಂಬೆಟ್ಟಿನ ನನ್ನ ಬಾಲ್ಯ ಜೀವನ"ದಲ್ಲಿ ನೋಡಬಹುದು.) ಪರಿಚಿತ ಪರಿಸರ, ಪರಿಚಿತ ಜನಜೀವನ ಇತ್ಯಾದಿಗಳಿಂದಾಗಿಯೇ ಇರಬಹುದು -- ಇಲ್ಲಿ ಕತೆಯ ಘಟನಾವಳಿಗಳು ಮೇಲಿಂದ ಮೇಲೆ ಘಟಿಸುತ್ತವೆ; ಕತೆಯ ವೇಗ, ವ್ಯಕ್ತಿಗಳ ಆವೇಶ, ಓದುಗರ ಭಾವನೆಗಳ ತೀವ್ರತೆ ಎಲ್ಲವೂ ಏರುತ್ತವೆ; ಓದುಗರ ಮನ ಕಲಕುತ್ತವೆ. ಇಲ್ಲಿಯ ಒಬ್ಬೊಬ್ಬ ವ್ಯಕ್ತಿಯ ವ್ಯಕ್ತಿತ್ವವೂ ಬೇರೆ ಬೇರೆ. ರಾಮಚಂದ್ರ ಪೈ, ತಿಮ್ಮಪೈ, ಶಿವಪ್ಪಯ್ಯ, ದೇವುಪೈ, ಕಾವೇರಮ್ಮ, ಅನಂತ ಪೈ, ಭುಜಂಗ ಪೈ, ಪೆದ್ದು ರಂಗ ಪೈ ಮುಂತಾದ ವ್ಯಕ್ತಿಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಶ್ರಾದ್ಧದ ದಿನ ಬಳ್ಳಂಬೆಟ್ಟು ಮನೆಯಲ್ಲಿ ನಡೆದ ಜಗಳ ಓದುಗನ ಕಣ್ಣೆದುರೇ ನಡೆಯುತ್ತದೆ; ಅಲ್ಲಿಯ ವ್ಯಕ್ತಿಗಳು ನಿಂತ ಸ್ಥಳ, ಭಂಗಿ, ಮುಖಭಾವ, ಎಲ್ಲವೂ ಸ್ಪಷ್ಟವಾಗಿ ಕಾಣುತ್ತದೆ. ಅಂತು ಪೈ, ಭುಜಂಗ ಪೈ, ಕಾವೇರಮ್ಮ ಮತ್ತು ರಾಚ್ಚು ಪೈಗಳಂತಹ ಭಾವ ತೀವ್ರತೆಯ ವ್ಯಕ್ತಿಗಳು ಓದುಗನ ಮನಸ್ಸಿನಿಂದ ಬೇಗನೆ ಮರೆಯಾಗಲಾರವು.
ಕಾದಂಬರಿಯನ್ನು ಕೊನೆಗೊಳಿಸುವ ಸಲುವಾಗಿಯೇ ಇರಬಹುದು- ಕೊನೆಯ ಕೆಲವೆ ಪುಟಗಳಲ್ಲಿ ಬಳ್ಳಂಬೆಟ್ಟು ಕುಟುಂಬದಲ್ಲಿ ಉಳಿದವರನ್ನೆಲ್ಲ ಸಾಯಿಸಿ ಬಿಟ್ಟು ನಾಗ್ಡೋ ಬೇತಾಳನನ್ನೂ ತಂದು, ಸಿದ್ದನ ವೆಂಕಟೇಶನೆಂಬ ಮಗುವನ್ನು ಮಾತ್ರ ಉಳಿಸಿ ಕಾದಂಬರಿಗೆ ಅವಸರದಲ್ಲಿ ಅಂತ್ಯ ಕಾಣಿಸಿದಂತೆ ತೋರುತ್ತದೆ.
ಗೋವೆಯಿಂದ ಪೋರ್ಚುಗೀಸರ ಹಿಂಸೆಯನ್ನು ತಡೆಯಲಾರದೆ ವಲಸೆ ಬಂದ ಸಾರಸ್ವತರ ಬಗ್ಗೆ ಹಾಗೂ ಕ್ರಿಶ್ಚನರ ಬಗ್ಗೆ ಅಲ್ಲಲ್ಲಿ ಅಲ್ಪ ಸ್ವಲ್ಪ ಓದಿ ಗೊತ್ತಿತ್ತು. ಬಲಾತ್ಕಾರದಿಂದ ಮತಾಂತರಗೊಂಡು ಕ್ರಿಶ್ಚನರಾದವರೂ ತಮ್ಮ ಹಿಂದಿನ ಸಂಪ್ರದಾಯಗಳನ್ನು ಬಿಡಲಾರದೆ ಪುನಃ ಹಿಂಸೆ ಅನುಭವಿಸಬೇಕಾದ್ದರಿಂದ ಅವರು ಕೂಡ ವಲಸೆ ಹೊರಟ ಬಗ್ಗೆ ಕಾದಂಬರಿಯಲ್ಲಿ ಪ್ರಸ್ತಾಪ ಇದೆ. ಇದನ್ನೋದುವಾಗ ನಾ.ಡಿಸೋಜಾರ ಯಾವುದೋ ಕತೆಯಲ್ಲಿ ಒಬ್ಬ ಕ್ರಿಶ್ಚನ್ ಯಕ್ಷಗಾನ ಬಯಲಾಟ ನೋಡಲು ಹೋದುದಕ್ಕೆ ಪೋರ್ಚುಗೀಸ್ ಪಾದ್ರಿ ಛಡಿಯೇಟು ಕೊಡುವುದು, ಅವನ ಚಲನವಲನಗಳ ಬಗ್ಗೆ ಗಮನವಿರಿಸುವುದು ಇತ್ಯಾದಿ ಓದಿದ ನೆನಪಾಗುತ್ತದೆ.
ಇದು ಸಾಮಾನ್ಯ ಓದುಗನಾಗಿ ನನಗನಿಸಿದ ಮಾತುಗಳಷ್ಟೇ ಹೊರತು ವಿಮರ್ಶೆಯ ಮಾತುಗಳಲ್ಲ. ನಾನು ವಿಮರ್ಶಕನೂ ಅಲ್ಲ, ವಿಮರ್ಶೆಯ ಭಾಷೆಯೂ ಗೊತ್ತಿಲ್ಲ. ಓದಿದ ಬಳಿಕ ಮನಸ್ಸಿನಲ್ಲಿ ಉಳಿದ ಒಂದೆರಡು ಸಂದೇಹಗಳನ್ನು ಅಥವಾ ಪ್ರಶ್ನೆಗಳನ್ನು ತಿಳಿಸಿ ಬಿಡುತ್ತೇನೆ.
೧. ಪೈ ಅವರ ಸಮಾಜ(ಕೊಂಕಣಿಗರು)ದವರನ್ನು ಗೌಡ ಸಾರಸ್ವತರೆನ್ನುತ್ತಾರಷ್ಟೆ? ಇದು ಸಾರಸ್ವತರ ಒಂದು ಪಂಗಡ. ಈ ಹೆಸರಿನಲ್ಲಿರುವ ’ಗೌಡ’ ಹೇಗೆ ಬಂತು? ಗೌಡ ಸಾರಸ್ವತ ಎಂಬ ಪದವನ್ನು ಕಾದಂಬರಿಯಲ್ಲಿ ಬಳಸಿಯೇ ಇಲ್ಲ.
೨. "ಸ್ವಪ್ನ ಸಾರಸ್ವತ" ಎಂಬ ಶೀರ್ಷಿಕೆಯ ಅರ್ಥ, ಮಹತ್ವ ಗೊತ್ತಾಗಲಿಲ್ಲ. ಇಲ್ಲಿ ಸ್ವಪ್ನ ಯಾಕೆ ಬಂತು?
೩. ನಾಗ್ಡೋ ಬೇತಾಳ ಮತ್ತು ಧಡ್ಡ ಲೇಖಕನ ಕಲ್ಪನೆಯ ಕೂಸುಗಳೋ ಅಥವಾ ಸಾರಸ್ವತ ಸಮಾಜದ ಪಾರಂಪರಿಕ ನಂಬಿಕೆಗಳೋ? (ನಂಬಿಕೆಗಳಾಗಿರಬಹುದೆಂದು ನಂಬುತ್ತೇನೆ). ಧಾರ್ಮಿಕ ಕಾರ್ಯಗಳಲ್ಲಿ ಧಡ್ಡನಿಗೆ (ಧಡ್ಡ ದಡ್ಡನಲ್ಲವೇ?) ಒಂದು ಮಣೆ ನೀಡುತ್ತಾರೆ ಎಂದಿದೆ. ಈ ಸಂಪ್ರದಾಯ ಈಗಲೂ ಇದೆಯೇ?
೪. "ಬಳ್ಳಂಬೀಡು" (ಬಳ್ಳಂಬೆಟ್ಟು ಅಲ್ಲ) ಮತ್ತು ಬಲ್ಲಾಳ ಅರಸು ಕಲ್ಪನೆಯಲ್ಲವೇ? ಅಲ್ಲಲ್ಲಿ ಸ್ಥಳೀಯ ಅರಸುಗಳ ಪ್ರಸ್ತಾಪ (ಉದಾಹರಣೆಗೆ ಬೇಳದ ಅರಸು, ಪಟ್ಟಾಜೆ ಅರಸು ಇತ್ಯಾದಿ)ವಿದೆ. ಇದು ಐತಿಹಾಸಿಕ ಸತ್ಯವೇ, ಗೊತ್ತಿಲ್ಲ.
೫. ನನಗೆ ಮೊದಲೇ ಇದ್ದ ಸಂಶಯಗಳಾದ ಯಾಕೆ ಕೊಂಕಣಿಗರು ಹಿರಿಯರನ್ನು ಮಾಮ್ ಮತ್ತು ಮಾಯಿ ಎಂದು ಸಂಭೋದಿಸುತ್ತಾರೆ, ಪ್ರತ್ಯೇಕ ದೇವಸ್ಥಾನಗಳನ್ನು ಕಟ್ಟಿಸುತ್ತಾರೆ, ಇತ್ಯಾದಿಗಳಿಗೆ ಉತ್ತರ ಸಿಕ್ಕಿತು. "ನಿಮ್ಮ ಜನ, ನಿಮ್ಮ ಭಾಷೆ" ಎಂದಿಗೂ ಬಿಡಬೇಡಿ ಎಂಬುದು ನಾಗ್ಡೋ ಬೇತಾಳನ ಆದೇಶವೆಂಬ ಮಾತು ಹಲವು ಸಲ ಬಂದಿದೆ.
೬. ಹಲವು ದಶಕಗಳ ಕಾಲ ದಕ್ಷಿಣ ಕನ್ನಡದಿಂದ ಹೊರಗೆಯೇ ಇದ್ದ ಪೈ ಅವರ ಬರವಣಿಗೆಯ ಭಾಷೆಯ ಮೇಲೆ ಇದರ ಪ್ರಭಾವವನ್ನು ಸ್ಪಷ್ಟವಾಗಿ ಕಾಣಬಹುದು. ಕೆಲವು ಕಡೆ ದಕ್ಷಿಣ ಕನ್ನಡದಲ್ಲಿ ಬಳಕೆಯಲ್ಲಿರುವ ಪದಗಳೂ, ಇನ್ನು ಕೆಲವು ಕಡೆ ಬೇರೆ (ಇತರ ಕಡೆ ಬಳಕೆಯಲ್ಲಿರುವ) ಪದಗಳೂ ಕಾಣುತ್ತವೆ.

2 comments:

  1. ಚೆಂದದ ಕಾದಂಬರಿಗೆ ಚೆಂದದ ಬೆನ್ನುಡಿ.

    "ಸ್ವಪ್ನ ಸಾರಸ್ವತ"ದ ಬಗ್ಗೆ ಕೇಳಿದ್ದೇನೆ. ಓದಬೇಕೆಂದಿದ್ದೆ, ಓದಲಾಗಿಲ್ಲ.
    ನಿಮ್ಮ ಈ ಬರಹದ ಮೂಲಕ ಓದಬೇಕೆಂಬ ಕುತೂಹಲ ಇಮ್ಮಡಿಯಾಗಿದೆ.

    ಬರಹಧಾರೆ ಮುಂದುವರಿಯಲಿ.
    ನಮಸ್ಕಾರ.

    ReplyDelete
  2. Interesting review, Udaya maava.
    Welcome to the world of blogging. Wish you a wonderful journey:)

    ReplyDelete